ಪಾಲೆರ್ಮೊ
ಇಟಲಿಯ ಸಿಸಿಲಿ ದ್ವೀಪದ ಒಂದು ಪ್ರಮುಖ ರೇವು ಪಟ್ಟಣ, ಪಾಲೆರ್ಮೊ ಪ್ರಾಂತ್ಯ ಮತ್ತು ಸಿಸಿಲಿ ಸ್ವಯಮಾಡಳಿತ ಪ್ರದೇಶದ ರಾಜಧಾನಿ. ಮುಖ್ಯ ಕೈಗಾರಿಕಾ ಸ್ಥಳ, ವಿಶ್ವವಿದ್ಯಾಲಯ ಕೇಂದ್ರ. ಜನಸಂಖ್ಯೆ 6985561 (2001). ಈ ನಗರದಲ್ಲಿ ಹಾಗೂ ಇದರ ಸುತ್ತಮುತ್ತ ಪುರಾತನ ಅವಶೇಷಗಳಿವೆ. ಪಾಲೆರ್ಮೊ ವಸ್ತು ಸಂಗ್ರಹಾಲಯ ಪ್ರಸಿದ್ಧವಾದ್ದು. 

ಈ ನಗರವನ್ನು ಫಿನಿಷಿಯನರು ಕ್ರಿ.ಪೂ. 8 ನೆಯ ಶತಮಾವದಲ್ಲಿ ಸ್ಥಾಪಿಸಿದರು. ಪಾರ್ತೆಜಿನಿಯರು ಇದನ್ನು ಗೆದ್ದುಕೊಂಡು ತಮ್ಮ ಅಧೀನದಲ್ಲಿದ್ದ ಸಿಸಿಲಿ ಪ್ರದೇಶಕ್ಕೆ ರಾಜಧಾನಿಯಾಗಿ ಮಾಡಿದರು. ಕ್ರಿ.ಪೂ. 254 ರಲ್ಲಿ ಇದು ರೋಮನರ ವಶವಾಯಿತು. ಮುಕ್ತ ನಗರವಾಗಿ ಇದು ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಇದು ಪೂರ್ವ ಸಾಮ್ರಾಜ್ಯದ ಭಾಗವಾಯಿತು. ಅನಂತರ ವ್ಯಾಂಡಲರೂ ಸಾರಸೆನರೂ (832-1071) ಇದನ್ನಾಳಿದರು. ನಾರ್ಮನ್ ದೊರೆ ರೋಜರ್ ಇದನ್ನು 1072 ರಲ್ಲಿ ಗೆದ್ದುಕೊಂಡು ಹೊಸದಾಗಿ ಸ್ಥಾಪಿಸಿದ ಸಿಸಿಲಿ ರಾಜ್ಯದ ರಾಜಧಾನಿಯಾಗಿ ಮಾಡಿಕೊಂಡ. ಫ್ರೆಂಚರ ಮುಖ್ಯವಾಗಿ ಅಂಜೂನ ಚಾಲ್ರ್ಸ್ ದೊರೆಯ ವಿರುದ್ಧ ಇಲ್ಲಿಯ ಜನ 1282ರಲ್ಲಿ ದಂಗೆ ಎದ್ದರು. ಅನಂತರ ಇದು ಅನುಕ್ರಮವಾಗಿ ಸವಾಯ್ ಹಾಗೂ ನೇಪಲ್ಸ್‍ನ ಬೂರ್ಬನ್ ಮನÉತನಗಳಿಗೆ ವಶವಾಯಿತು. 1848ರ ಬಂಡಾಯದಲ್ಲಿ ಇದು ದಾಳಿಗೆ ಗುರಿಯಾಯಿತು. ಗರಿಬಾಲ್ಡಿ 1860ರಲ್ಲಿ ಇದನ್ನು ಆಕ್ರಮಿಸಿಕೊಂಡ. 1861ರಲ್ಲಿ ಇದು ಇಟಲಿ ರಾಜ್ಯದ ಭಾಗವಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ 1943ರಲ್ಲಿ ಇದು ಮಿತ್ರ ಸೇನೆಗಳ ವಶವಾಗಿತ್ತು.

ಇಲ್ಲಿಯ ಪ್ರಾಚೀನತಮ ಕಟ್ಟಡಗಳು ನಾರ್ಮನ್ ಅರಸರ ಕಾಲದವು. ಇವರ ಅರಮನೆ ಹಾಗೂ ಚರ್ಚುಗಳು ಸಾರಸನಿಕ್ ಮತ್ತು ಬಿಜಾಂಟೇನ್ ಶೈಲಿಗಳಲ್ಲಿ ನಿರ್ಮಿತವಾಗಿವೆ. ಇವೆರಡು ಶೈಲಿಗಳಿಂದ ಹೆಚ್ಚಿದ ಅರಬ್ಬೀ ನಾರ್ಮನ್ ಶೈಲಿಗೆ ಮಿಲ್ ಆರ್ಚ್‍ಬಿಷಪ್ ವಾಲ್ಟರ್ ಎಂಬ ಆಂಗ್ಲ ಕಟ್ಟಿಸಿದ ಆರಾಧನಾ ಮಂದಿರ ಒಂದು ಒಳ್ಳೆಯ ಉದಾಹರಣೆ. ಎರಡನೆಯ ಹೆನ್ರಿ ಇವನನ್ನು ಸಿಸಿಲಿಯ ಎರಡನೆಯ ವಿಲಿಯಮ್‍ನಿಗೆ ಶಿಕ್ಷಕನಾಗಲು ಕಳುಹಿಸಿದ್ದ. ಬಹುಶಃ 8ನೆಯ ಶತಮಾನ ಅಥವಾ ಅದಕ್ಕೂ ಹಿಂದಿನದಿರಬಹುದಾದ ಬ್ಯಾಸಿಲಿಕಾ ಕಟ್ಟಡದ ನಿವೇಶನದ ಮೇಲೆ ಮಂದಿರವನ್ನು ನಿರ್ಮಿಸಲಾಗಿದೆ. ಸಾರಸೆನ್ ದಿಗ್ವಿಜಯಾನಂತರ ಇದು ಮಸೀದಿಯಾಗಿತ್ತು. 1185ರಲ್ಲಿ ಮೊದಲು ಗ್ರೀಕ್ ವಿಧಿಗೂ ಅನಂತರ ಲ್ಯಾಟಿನ್ ವಿಧಿಗೂ ಅನುಗುಣವಾಗಿ ಇದರ ಪ್ರತಿಷ್ಠಾಪನೆಯ ಕಾರ್ಯ ನಡೆಯಿತು. 11781-1801ರಲ್ಲಿ ಫರ್ಡಿನಾಂಡೋ ಪ್ಯುಗ ಎಂಬವನು ಇದಕ್ಕೆ ಒಂದು ಗುಮ್ಮಟವನ್ನು ಸೇರಿಸಿದ. ಇದರಿಂದಾಗಿ ಕಟ್ಟಡದ ಸೌಂದರ್ಯಕ್ಕೆ ಕುಂದುಂಟಾಗಿದೆ. ಎರಡನೆಯ ಫ್ರೆಡ್‍ರಿಕ್ ಮತ್ತು ಅವನ ತಂದೆತಾಯಿಗಳ ಸಮಾಧಿಗಳು ಈ ಕಟ್ಟಡದಲ್ಲೇ ಇವೆ. ಕೆಂಪು ಅಗ್ನಿಶಿಲೆಯಿಂದ ರಚಿಸಲಾದ ಶವಸಂಪುಟಗಳಿಗೆ ಅಮೃತಶಿಲೆಯ ಮೇಲ್ಗಟ್ಟುಗಳಿವೆ.

ನಗರದ ಪಶ್ಚಿಮ ತುದಿಯಲ್ಲಿರುವ ಎರಡನೆಯ ರೋಜರ್ (1132-40) ಕಟ್ಟಿಸಿದ. ಕಾಟೆರ್ಲಾ ಪಾಲಟೀನ ಎಂಬ ಕಟ್ಟಡವೂ ಅರಬ್ಬೀ-ನಾರ್ಮನ್ ಶೈಲಿಯದು. ಇದು ಅದ್ಭುತವಾದ ಮೊಸಾಯಿಕ್‍ಗಳಿಂದಲೂ ಅರಬ್ಬೀ ಶೈಲಿಯ ಚಾವಣಿ ಮತ್ತು ಬಣ್ಣಹಚ್ಚಿದ ಮರದ ಭಾಗಗಳಿಂದಲೂ ಕೂಡಿದೆ. ಗೋಡೆಗಳ ಕೆಳಭಾಗಕ್ಕೆ ಹಾಗೂ ನೆಲಕ್ಕೆ ಅಮೃತಶಿಲೆಗಳನ್ನು ಹಾಸಿದೆ. ರೋಜರ್ ದೊರೆಯ ಸಭಾಭವನವಾಗಿದ್ದ ಕಟ್ಟಡ ಈಗ ಸಿಸಿಲಿಯ ಪಾರ್ಲಿಮೆಂಟ್ ಭವನ. ಇದು ಕೂಡ ಆ ಕಾಲದ ಬೇಟೆಯ ದೃಶ್ಯಗಳಿಂದ ಚಿತ್ರಿತವಾದ ಮೊಸಾಯಿಕ್‍ಗಳಿಂದ ಅಲಂಕೃತಗೊಂಡಿದೆ. ಲಾ ಫವರೂ ಮಿಮ್ನೆರ್ಮಮ್, ಲಾಹಿಸಾ ಮುಂತಾದ ಅರಮನೆಗಳೂ ಇದೇ ಶೈಲಿಯವು.

ಚರ್ಚುಗಳನ್ನು ಹೆಚ್ಚಾಗಿ ವಿಶಿಷ್ಟವಾದ ಬಿಜಾಂಟೀನ್ ಶೈಲಿಯಲ್ಲಿ ಕಟ್ಟಲಾಗಿದೆ. ಈ ಕಟ್ಟಡಗಳಲ್ಲಿ ಬಣ್ಣದ ಕಲ್ಲು ಹಾಗೂ ಗಾಜಿನ ಚೂರುಗಳನ್ನು ಸಿಮೆಂಟಿನ ಮೇಲೆ ಜೋಡಿಸಿ ಚಿತ್ರಗಳನ್ನು ಬಿಡಿಸಿ ಮೊಸಾಯಿಕ್‍ನಿಂದ ಅಲಂಕರಿಸುತ್ತಿದ್ದರು. ಲಾ ಮಾರ್ಟೊರಾನಾರ ಚರ್ಚಿನ ಮೊಸಾಯಿಕ್‍ಗಳಲ್ಲಿ ಅದರ ಸ್ಥಾಪಕ ರೋಜರನ ಚಿತ್ರವಿದೆ. 12 ನೆಯ ಶತಮಾನದಲ್ಲಿ ಸಿಸ್ಟರ್ಸಿಯನ್ನರು ಹೊಸ ಬಗೆಯ ಮಂದಿರಗಳನ್ನು ಬಳಕೆಗೆ ತಂದರು. ಇವುಗಳಿಂದ ಶೈಲಿಯಲ್ಲಿ ಅಂಥ ಮಹತ್ತರ ಪರಿವರ್ತನೆಯೇನೂ ಆಗದಿದ್ದರೂ ಪರಿಣಾಮದಲ್ಲಿ ಗಮನಾರ್ಹ ವ್ಯತ್ಯಾಸಗಳಾದವು. ಗುಮ್ಮಟದ ಬದಲಾಗಿ, ಆರಾಧನೆಯ ಕಾಲದಲ್ಲಿ ಹಾಡುವವರಿಗಾಗಿ ಪ್ರತ್ಯೇಕ ಸ್ಥಳವೊಂದು ರೂಪುಗೊಂಡಿದ್ದು ಒಂದು ಮುಖ್ಯ ಬದಲಾವಣೆ. ಇದಕ್ಕೆ ಸಂತೋ ಸ್ಪಿರಿಟೋದ ಚರ್ಚು ಒಂದು ನಿದರ್ಶನ. 12-15 ನೆಯ ಶತಮಾನಗಳ ಕಾಲಕ್ಕೆ ಸೇರಿದ ಅನೇಕ ಮಂದಿರಗಳು ಇಲ್ಲಿವೆ.

16ನೆಯ ಶತಮಾನದಲ್ಲಿ ಹೊಸ ಬೀದಿಗಳು ರೂಪುಗೊಂಡು, ಅರಮನೆ ಕಟ್ಟಡಗಳಿಂದ ಅಲಂಕೃತವಾದವು. ಈಗ ಉಳಿದಿರುವ ನಗರ ದ್ವಾರಗಳು ಈ ಕಾಲದಲ್ಲಿ ಬರೋಕ್ ಶೈಲಿಯಲ್ಲಿ ನಿರ್ಮಿತವಾದವು. ಈ ಕಾಲದಲ್ಲಿ ಮೆರುಗು ಆಡಂಬರಗಳ ಕಡೆಗೆ ಒಲವು ಹೆಚ್ಚಿತು. 17ನೆಯ ಶತಮಾನದ ಸ್ಟ್ಯಾನಿಷ್ ಪ್ರಭಾವದ ಕಾಲದಲ್ಲಿ ಇದು ಇನ್ನೂ ಬೆಳೆಯಿತು. ರಸ್ತೆಗಳ ಚೌಕಗಳಲ್ಲಿ ದೊಡ್ಡ ಕಟ್ಟಡಗಳನ್ನು ಮೂರ್ತಿಶಿಲ್ಪ, ಉಬ್ಬುಶಿಲ್ಪ ಅಥವಾ ಇತರ ಶಿಲ್ಪಗಳಿಂದ ಅಲಂಕರಿಸಲಾಯಿತು. 1805ರಲ್ಲಿ ಪಾಲೆರ್ಮೊದಲ್ಲಿ ಒಂದು ವಿಶ್ವವಿದ್ಯಾಲಯ ಆರಂಭವಾಯಿತು.

ಪಾಲೆರ್ಮೋನ ಮುಖ್ಯ ರಫ್ತುಗಳು ಹಣ್ಣು, ಆಲಿವ್ ಎಣ್ಣೆ, ದ್ರಾಕ್ಷಾರಸ, ಇಲ್ಲಿ ಹಡಗುಗಳನ್ನು ನಿರ್ಮಿಸಲಾಗುತ್ತದೆ. ಉಕ್ಕು, ಗಾಜು, ರಾಸಾಯನಿಕಗಳು, ಪೀಠೋಪಕರಣಗಳು ಇವು ಇಲ್ಲಿಯ ಪ್ರಮುಖ ತಯಾರಿಕೆಗಳು. ಈ ನಗರದ ಸಮೀಪದಲ್ಲಿರುವ ಮಾಂಟೆ ಪೆಲೆಗ್ರಿನೊ ಮತ್ತು ಮಾಂಡೆಲೊ ಬೀಚ್ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳು. ಈ ನಗರಕ್ಕೆ ಭೂ, ಜಲ ಮತ್ತು ವಿಮಾನ ಸಾರಿಗೆ ಸಂಪರ್ಕವಿದೆ. 						(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ